Monday 13 December 2010

ಮರೆಯಲಾಗದ ಆ nenapu

ಯಾಕೋ ಆ ಕರಾಳ ಸಂಜೆ ಇಂದಿಗೂ ಭಯ ಮೂಡಿಸುತ್ತದೆ. ನೆನಪಾದಾಗಲೆಲ್ಲ ಮಗುವಿನಂತೆ ಕುಳಿತು ಅತ್ತು ಬಿಡುತ್ತೇನೆ. ಭಗವಂತನ ಕೃಪೆಯಿಂದ ಸುರಳಿತವಾಗಿ ಮನೆ ತಲುಪಿದ್ದೆ. ಬದುಕು ಮುಗಿಯಿತು ಎಂದು ಭಾವಿಸಿ ಕೈಚೆಲ್ಲಬೇಕೆಂದು ನಿರ್ಧರಿಸಿದ್ದ ನನ್ನೊಳಗೆ ಪುಟ್ಟದೊಂದು ಭಯ, ಭರವಸೆ, ಧೈರ್ಯ ಎಲ್ಲವೂ ಒಟ್ಟಿಗೆ ಹರಸಿದ ಭಾವ.
ಸುಮಾರು ಎರಡು ವರ್ಷದ ಹಿಂದಿನ ಮಾತು. ಬಿಎ ಮುಗಿಸಿದ್ದ ನಾನು ಎಂಎ ಅಭ್ಯಾಸಕ್ಕಾಗಿ ಕಾಯುತ್ತಿದ್ದೆ. ಪ್ರವೇಶ ಪರೀಕ್ಷೆಗೆ ಎರಡು ತಿಂಗಳು ಬಾಕಿ ಇದ್ದದ್ದರಿಂದ ಊರಲ್ಲೇ ಕುಳಿತು ನನ್ನ ಅಭ್ಯಾಸ ಮುಂದುವರಿದಿತ್ತು. ಅಪ್ಪ್ಲಿಕೇಶನ್ ಫೋರ್ಮನಲ್ಲಿ ಮೈಗ್ರೇಶನ್ ಸಟರ್ಿಫಿಕೇಟ್ ಸಲ್ಲಿಸಬೇಕೆಂಬುದನ್ನು ನೋಡಿ ತಡಮಾಡದೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ತೆರಳಬೇಕೆಂದು ನಿರ್ಧರಿಸಿದೆ. ಅಪ್ಪ ನನ್ನ ಜೊತೆಯಲ್ಲಿ ಬರಬೇಕೆಂದು ಎಷ್ಟೋ ಗೋಗರೆದೆ. ಪ್ರೌಢಶಾಲೆಯ ಶಿಕ್ಷಕರಾದ ಅಪ್ಪ ರಜೆ ಕೊಡುವುದಿಲ್ಲ ನೀನೆ ಹೋಗಿ ಬಾ ಮಗಳೆ ಎಂದುಬಿಟ್ಟರು. ಅಮ್ಮನ ಬಳಿ ಹೋಗಿ ನೀವಾದರೂ ಬನ್ನಿ ಅಮ್ಮ. ಈಗೀಗ ಎಲ್ಲದಕ್ಕೂ ನನ್ನೊಬ್ಬಳನ್ನೇ ಕಳಿಸುತ್ತೀರಿ. ನೋಡದ ಜಾಗ. ಯಾರಾದರೂ ಜೊತೆಗಿದ್ದರೆ ನನಗೂ ಖುಷಿಯಾಗುತ್ತೆ ಎಂದೆ. ಹಳ್ಳಿಯ ಬದುಕು. ಹೊರಡಬೇಕೆಂದ ಕೂಡಲೆ ಸುಲಭವಾಗಿ ಹೊರಡುವುದು ಅಸಾಧ್ಯ.
ಕಣ್ಣೀರಿಡುತ್ತಲೇ ನಿದ್ದೆ ಹೋಗಿದ್ದೆ. ಬೆಳಿಗ್ಗೆ ಯಾರ ಜೊತೆಗಿನ ಮಾತೂ ನನಗೆ ಬೇಡವಾಗಿತ್ತು. ಸುಮ್ಮನೆ ರೆಡಿಯಾಗಿ 6.30 ಕ್ಕೆಲ್ಲ ಮನೆಯಿಂದ ಹೊರಟೆ. ದಾರಿಯುದ್ದಕ್ಕೂ ನನಗೆ ಸಾಥ ನೀಡಿದ್ದು ಕಣ್ಣೀರು ಮತ್ತು ಗೋಗರೆದು ಅಪ್ಪನಿಂದ ತೆಗೆಸಿಕೊಂಡ ನೋಕಿಯಾ ಮೊಬೈಲ್. 11.30 ಗಂಟೆ ಸುಮಾರಿಗೆ ವಿವಿ ತಲುಪಿದೆ. ಯಾಕೋ ಮೈ ಹುಶಾರಿಲ್ಲ ಎನಿಸ ತೊಡಗಿತು. ಅಲ್ಲೋ ಉರಿ ಬಿಸಿಲು. ವಿಶಾಲವಾದ ಆ ವಿವಿಯಲ್ಲಿ ಹೋಗೋದೆಲ್ಲಿ ಬರೋದೆಲ್ಲಿ ತಿಳಿಯುತ್ತಿರಲಿಲ್ಲ. ಕೇಳಿ ಕೇಳಿ ಅದ್ಯಾವುದೋ ಮೂಲೆಯಲ್ಲಿ ಕಛೇರಿ ಇರುವುದು ತಿಳಿಯಿತು.
ಬ್ಯಾಗ್ ಹೆಗಲಿಗೇರಿಸಿ ಅತ್ತ ನಡೆದೆ. ದಾರಿ ಮಧ್ಯೆ ಚಪ್ಪಲ್ ಹರಿದು ಹೋಯಿತು. ಸುಮಾರು ಒಂದು ಕಿಲೊ ಮೀಟರ್ ಆ ಉರಿಬೀಸಿಲಿನಲ್ಲಿ ಚಪ್ಪಲ್ಲಿಯನ್ನು ಹಾಗೇ ಹೊಸೆಯುತ್ತ ನಡೆದು ತಲುಪಿದೆ. ದಾರಿಯಲ್ಲಿ ಹುಡುಗರು ಏನೇನೊ ಕಮೆಂಟ್ಸ್ ಕೊಡುತ್ತಿದ್ದರು. ಪಾಪ ಎನಿಸಿ ಸಹಾಯ ಮಾಡಲು ಯಾರೂ ಮುಂದಾಗಲಿಲ್ಲ. ಕಛೇರಿಗೆ ಹೋದರೆ ಇನ್ನೊಂದು ತಲೆಬಿಸಿ ಕಾದಿತ್ತು. ಬ್ಯಾಂಕ್ ವ್ಯವಹಾರದಲ್ಲಿ ಅಷ್ಟಕ್ಕಷ್ಟೇ ಜ್ಞಾನ ಇದ್ದ ನಾನು ಮತ್ತೆ ಒಂದು ಕಿಲೊ ಮೀಟರ್ ದೂರವಿರುವ ಬ್ಯಾಂಕ್ಗೆ ಹೋಗಿ ಹಣ ತುಂಬಿಬರಬೇಕಿತ್ತು. ವಿಧಿಯಿಲ್ಲದೆ ಮತ್ತೆ ಅಲ್ಲಿಂದ ಹೊರಟೆ. ಚಪ್ಪಲ್ ಇಲ್ಲದೆ ನಡೆಯುವ ಸ್ಥಿತಿಯಲ್ಲಿರಲಿಲ್ಲ. ಉರಿಬಿಸಿಲಿನ ಮಂಗಳೂರಿನ ಆ ರೋಡ್ ಸುಡುತ್ತಿತ್ತು. ವೇಲ್ಗೆ ಹಾಕಿದ್ದ ಪಿನ್ ತೆಗೆದು ಚಪ್ಪಲಿಗೆ ಹಾಕಿ ಹೊರಟೆ.
ಒಂದು ತಿಂಗಳು ಮನೆಯ ತಂಪಲ್ಲಿ ಕುಳಿತ ನನಗೆ ಆ ಬಿಸಿಲು ತಡೆಯಲಾಗದೆ ತಲೆಸುತ್ತಿ ಬಿದ್ದುಬಿಟ್ಟೆ. ಪ್ರಪಂಚದಲ್ಲಿ ನನಗೆ ನಾನೊಬ್ಬಳೇ ಅನಿಸಿ ಮೂಕಳಾದೆ. ವೇಲ್ ತಲೆಮೇಲೆ ಹಾಕಿ ಹೇಗೋ ನಡೆದೆ. ಓಯಾಸಿಸ್ನಲ್ಲಿ ನೀರು ದೊರೆದಂತೆ ನನಗೆ ಪುಟ್ಟದೊಂದು ಶಾಪ್ ಕಾಣಿಸಿತು. ಇರುವ ಶಕ್ತಿಯನ್ನೆಲ್ಲ ತುಂಬಿಕೊಂಡು ಸರಸರನೆ ಶಾಪ್ ತಲುಪಿದೆ. ಕೂಲ್ ಡ್ರಿಂಕ್ಸ್ ಕುಡಿದೆ. ಸ್ವಲ್ಪ ಸಮಾಧಾನವೆನಿಸಿತು. ಸಮಯ ಎರಡು ಗಂಟೆಯಾಗಿತ್ತು. ಹಣ ಕೊಟ್ಟು ಅಲ್ಲಿಂದ ಜಾಗ ಕಾಲಿ ಮಾಡಿ ಚಲನ್ ತುಂಬಿ ವಾಪಸ್ ಹೋದೆ. ನಾಲ್ಕು ಗಂಟೆಗೆ ನಿಮ್ಮ ಸಟರ್ಿಫಿಕೇಟ್ ಸಿಗುತ್ತೆ ಎಂದರು. ಸ್ವಲ್ಪ ಬೇಗ ಕೊಡಿ ಊರು ತಲುಪಬೇಕೆಂದೆ. ಅಲ್ಲಿದ್ದ ಒಬ್ಬಾಕೆ ನೀವು ಕೇಳಿದ ಸಮಯಕ್ಕೆ ಕೊಡೊಕ್ಕಾಗಲ್ಲ. ವೇಟ್ ಮಾಡಿ ಇಲ್ಲಾಂದ್ರೆ ನಾಳೆ ಬನ್ನಿ ಎಂದಳು. ನಾಳೆ ವಾಪಸ್ ಬರೋಕ್ಕೆ ಹತ್ತಿರದಲ್ಲಿ ನನ್ನ ಸಂಬಂಧಿಕರ ಮನೆ ಇರಲಿಲ್ಲ. ನೆತ್ತಿಗೆ ಏರಿದ್ದ ಸಿಟ್ಟನ್ನು ಹೇಗೋ ತಡೆದುಕೊಂಡೆ.
ಐದು ಗಂಟೆಯಾದರೂ ನನ್ನ ವೇಟಿಂಗ್ ಮುಂದುವರೆದಿತ್ತು. ಅಪ್ಪ, ಅಮ್ಮ ಎಲ್ಲರ ಮೇಲೂ ನನಗೆ ತಡೆಯಲಾರದ ಕೋಪ ಉಕ್ಕಿತ್ತು. ಪಟ್ಟಂತ ಕೊನ್ವೊಕೇಶನ್ ಸಟರ್ಿಫಿಕೇಟ್ ನೆನಪಾಯಿತು. ಅಲ್ಲಿರುವ ಸ್ವಾಗತಕಾರನನ್ನು ಕೇಳಿದೆ. ಹೋಗಿ ಚಲನ್ ತುಂಬಿ ಬನ್ನಿ, ವಿಳಾಸ ಬರೆದುಕೊಡಿ ಊರಿಗೆ ಕಳುಹಿಸಿಕೊಡುತ್ತೇವೆ. 400 ರೂ ಆಗುತ್ತೆ ಅಂದರು. ಮತ್ತೆ ಹಣ ಕಟ್ಟಬೇಕೆಂದು ಕೋಪ ಬಂತಾದರೂ ವಾದಿಸುವಷ್ಟು ಶಕ್ತಿ ನನ್ನಲ್ಲಿ ಉಳಿದಿರಲಿಲ್ಲ. ಊರಿಗೆ ನಾನು ಹೋಗಿ ತಲುಪೋಕೆ ಲೇಟ್ ಆಗತ್ತೆ. ನಾನು ನಿಮಗೆ ಚಲನ್ ತುಂಬಿ ಹಣ ಕೊಡುತ್ತೇನೆ. ನೀವೆ ಕಟ್ಟುತ್ತೀರಾ? ಎಂದೆ. ನನ್ನ ಸ್ಥಿತಿ ಅವರಿಗೆ ಅರ್ಥವಾದಂತಿತ್ತು. ಆಯ್ತು ಎಂದರು. ಸಮಾಧಾನದ ಚಿಕ್ಕ ನಿಟ್ಟುಸಿರು ಬಿಟ್ಟೆ. ಅವರಿಗೆ ಧನ್ಯವಾದ ತಿಳಿಸಿದೆ. ಅಷ್ಟ್ಹೊತ್ತಿಗೆ ನನ್ನ ಮೈಗ್ರೇಶನ್ ಸಟರ್ಿಫಿಕೇಟ್ ರೆಡಿಯಾಗಿತ್ತು.
ಸಮಯ 5.30 ಆಗಿತ್ತು. ಸ್ವಾಗತಕಾರರಿಗೆ ಇನ್ನೊಮ್ಮೆ ಧನ್ಯವಾದ ತಿಳಿಸಿ ಚಲನ್ ಮರೆಯಬೇಡಿ ಎಂದು ನೆನಪಿಸಿ ಹೊರಟೆ. ಊಟವೂ ಇಲ್ಲದ ನನ್ನ ದೇಹ ಸಮಯಕ್ಕೆ ಹೆದರಿ ಮುಂದೆ ಸಾಗಿತು. ನನ್ನ ಸ್ಥಿತಿ ಬಸ್ಸಿಗೆ ಹೇಗೆ ತಿಳಿಯಬೇಕು. ನಿಧಾನವಾಗಿ ಅದು 6 ಗಂಟೆಗೆ ಬಂತು. ಬಸ್ಸು ಎಷ್ಟೇ ವೇಗವಾಗಿ ತೆರಳಿದರೂ ನಿಧಾನವೆನಿಸಿ ಚಾಲಕನ ಮೇಲೆ ಕೋಪ ಬರುತ್ತಿತ್ತು. ಬೇಗ ಹೋಗಯ್ಯ ಹೇಳಿಬಿಡೋಣ ಎನಿಸಿದರೂ ತಡೆದುಕೊಂಡೆ. ಬ್ರಹ್ಮಾವರದಲ್ಲಿರುವ ಅಣ್ಣನ ಮನೆಗೆ ಹೋಗುವುದೆಂದು ನಿರ್ಧರಿಸಿದೆ. ಉಡುಪಿ ತಲುಪುವಾಗ ಒಂಭತ್ತು ಗಂಟೆ. ನಾನು ಸಂಪೂರ್ಣ ಹೈರಾಣಾಗಿದ್ದೆ. ಅಲ್ಲಿಯ ಸೆಕೆಗೆ ಬೆವರಿಗೆ ಸ್ನಾನ ಮಾಡದೆ ಇರಲಾರೆ ಎನಿಸಿಬಿಟ್ಟಿತು. ಆ ತಡರಾತ್ರಿಯಲ್ಲಿ ಉಡುಪಿಯ ಅಂಗಡಿಯೊಂದಕ್ಕೆ ಭೇಟಿ ನೀಡಿ ಬಟ್ಟೆ ಖರೀದಿಸಿ ಬ್ರಹ್ಮಾವರದ ಬಸ್ ಹತ್ತಿದೆ.
ಇದ್ದಕ್ಕಿದ್ದಂತೆ ಮಳೆ ಹನಿ ಜಿನುಗುವ ಶಬ್ದ ಕೇಳಿಸಿತು. ಹಗಲೆಲ್ಲ ನಾನು ಗೋಳಾಡುವಾಗ ಬಾರದ ತಂಪು ಗಾಳಿಯ ಮೇಲೆ ನನ್ನ ಮುನಿಸು ಹರಿದಾಡಿತು. ಮಳೆ ಜೋರಾಯಿತು. 20 ನಿಮಿಷಕ್ಕೆ ಬ್ರಹ್ಮಾವರಕ್ಕೆ ತಲುಪಬಹುದಾಗಿದ್ದ ಬಸ್ಸು 50 ನಿಮಿಷ ತೆಗೆದುಕೊಂಡಿತು. ಸ್ಟಾಪ್ ಬಂದರೂ ಇಳಿಯುವುದು ಹೇಗೆ? ಅಸಾಧಾರಣ ಮಳೆ. ಭಗವಂತ ನೀನೆ ಕಾಪಾಡಪ್ಪ ಎಂದು ಪ್ರಾಥರ್ಿಸಿದೆ. ಬಸ್ಸಿನವ ಅಟೊ ಹತ್ತರ ಬರುವ ತನಕ ಬಸ್ ನಿಲ್ಲಿಸಿಕೊಂಡ. ನಾನು ಹೋಗುವ ಎಡ್ರೆಸ್ ಹೇಳಿದೆ. ಹೊಸಬ ಎನಿಸುತ್ತೆ. ಅಲ್ಲಾ ಇಲ್ಲಾ ಎಂದು ಕೇಳತೊಡಗಿದ. ನಂಗೆ ದಾರಿ ಗೊತ್ತು ನಡೀರಿ ಹೇಳ್ತೀನಿ ಎಂದೆ. ರಸ್ತೆ ಆ ಧಾರಕಾರ ಮಳೆಗೆ ಮಬ್ಬಾಗಿತ್ತು.
ಮನಸ್ಸನ್ನು ಗಟ್ಟಿ ಮಾಡಿ ಕುಳಿತಿದ್ದ ನನಗೆ ದಾರಿಯೊಂದು ಕಾಣಿಸಿತು. ಇದೇ ದಾರಿ ಎಂದೆ. ಅಂತೂ ಬಂದು ತಲುಪಿದೆ ಎಂದುಕೊಂಡೆ. ನೋಡಿದರೆ ಅಟೊಕ್ಕೆ ಹೋಗಲು ಮುಂದೆ ಜಾಗವಿರಲಿಲ್ಲ. ಲಾರಿಯೊಂದು ನನ್ನ ಕಣ್ಣಿಗೆ ಬಿತ್ತು. ಬಹುಶಃ ನನ್ನ ಬದುಕಿನ ಕೊನೆಯ ದಿನ ಇದು ಎಂದು ಭಾವಿಸಿದೆ. ಮೊದಲೇ ಚಳಿಯಲ್ಲಿ ನಡೆಗಿದ್ದ ನಾನು ಹೆದರಿ ಬೆವರಿದೆ. ನನಗೆ ದಾರಿ ತಪ್ಪಿದಂತಿದೆ. ದಯವಿಟ್ಟು ಬೇಗ ವಾಪಸ್ ಗಾಡಿ ತಿರುಗಿಸಿ ಅಣ್ಣಾ ಎಂದೆ. ನನ್ನ ಅದೃಷ್ಟಕ್ಕೆ ಆತ ಒಳ್ಳೆಯವನಿದ್ದ. ಅತ್ತಿಗೆಗೆ ಫೋನ್ ಹಚ್ಚಿದೆ. ದಾರಿ ತಿಳಿಯುತ್ತಿಲ್ಲ ಎಂದೆ. ಅವರೇನೇನೋ ಹೇಳಿದರು. ಹೆದರಿದ್ದ ನನಗೆ ಏನೊಂದೂ ಅರ್ಥವಾಗಲಿಲ್ಲ. ಫೋನ್ ಅವನ ಕೈಗೇ ಕೊಟ್ಟೆ. ಆಯ್ತಮ್ಮ ತಿಳೀತು. ಹತ್ತಿರವೇ ಇದ್ದೇವೆ. ತಂದು ಮುಟ್ಟಿಸುವ ಜವಾಬ್ದಾರಿ ನಂದು ಎಂದ.
ಮನೆಯ ಅಂಗಳದ ಮುಂದೆ ಆಟೊ ನಿಂತಾಗ ನನ್ನ ಜೀವ ಮರಳಿ ಬಂದಿತ್ತು. ಅವನಿಗೆ ಹೇಗೆ ಧನ್ಯವಾದ ಹೇಳಲಿ ತಿಳಿಯಲಿಲ್ಲ. ಅತ್ತಿಗೆಗೆ ಪರಿಚಯದವನಂತೆ ತೋರಿದ. ಅಕ್ಕಾ ನೀವಾ? ಅವಳು ತುಂಬಾ ಹೆದರಿಬಿಟ್ಟಿದ್ದಾಳೆ. ಸಮಾಧಾನ ಹೇಳಿ ಎಂದು ಹೊರಟ. ಆಗ ಸಮಯ 10 ಗಂಟೆ 20 ನಿಮಿಷ.............
ಎಂದೂ ಮರೆಯಲಾಗದ ಈ ಘಟನೆ ಆಗಾಗ ನೆನಪಾಗುತ್ತಲೇ ಇರುತ್ತದೆ. ಈಗಲೂ ಹೊಸ ಜಾಗಕ್ಕೆ ಹೋಗುವಾಗ ಯಾರಾದರೂ ಒಟ್ಟಿಗೆ ಬರಲೇ ಬೇಕೆಂದು ಹಠ ಹಿಡಿದು ಅವರ ಜೊತೆಯಲ್ಲೇ ಹೋಗುತ್ತೇನೆ. ನನಗಾದ ಈ ಘಟನೆಯಿಂದ ಅಪ್ಪ ಅಮ್ಮ ನನ್ನ ಜೊತೆಗೆ ಬರಲು ನಿರಾಕರಿಸೊಲ್ಲ. ಬ್ಯುಸಿ ಬದುಕಲ್ಲೂ ನನಗಾಗಿ ಅವಶ್ಯಕತೆ ಬಿದ್ದಾಗ ಶಾಲೆಗೆ ರಜೆ ಹಾಕಿ ಅಪ್ಪ ಜೊತೆಯಾಗುತ್ತಾರೆ. ಊರಿಗೆ ಹೋದರೆ ಪೇಟೆಯಿರಲಿ, ಆಸ್ಪತ್ರೆಯಿರಲಿ ಎಲ್ಲೇ ಆಗಲಿ ಅಪ್ಪ ಇಲ್ಲವೆ ಅಮ್ಮನನ್ನು ಜೊತೆಗೇ ಕರೆದೊಯ್ಯುತ್ತೇನೆ.
ಎಲ್ಲ ತಂದೆ ತಾಯಿಯರಿಗೆ ನನ್ನದೊಂದು ಕೋರಿಕೆ. ಅವಶ್ಯವಿದ್ದಾಗ ನಿಮ್ಮ ಪ್ರೀತಿ ಕಡಿಮೆಮಾಡದಿರಿ. ಒಂದೆರಡು ಬಾರಿ ಒಂಟಿಯಾಗಿ ತಿರುಗಾಡಿಬಿಟ್ಟರೆ ಮಕ್ಕಳಿಗೆ ಧೈರ್ಯ ಬಂದಿದೆ. ಅವರ ಜೊತೆ ಓಡಾಡುವ ಕೆಲಸ ತಪ್ಪಿತು ಎಂದುಕೊಳ್ಳುವ ಭಾವನೆ ಹಲವರಿಗಿದೆ. ಬದುಕಿನಲ್ಲಾಗುವ ಚಿಕ್ಕ ಚಿಕ್ಕ ಭಯಗಳೂ ಅವರನ್ನು ಜೀವನ ಪರ್ಯಂತ ಅಧೈರ್ಯರನ್ನಾಗಿಸಿಬಿಡುತ್ತದೆ. ಮಕ್ಕಳಿಗೆ ಬೇಕಾದುದು ನಿರಂತರ ಪ್ರೀತಿ ಮತ್ತು ಸಾಥ್. ಯಾವುದೋ ಸ್ನೇಹಿತರ ಸಾಥ ಪಡೆಯೋಕ್ಕಿಂತ ಅಪ್ಪ ಅಮ್ಮ ಸಾಧ್ಯವಾದಷ್ಟು ಸಂದರ್ಭ ಜೊತೆಗಿದ್ದರೆ ಆ ಮಕ್ಕಳ ಖುಷಿಯೇ ಬೇರೆ. ಒಂಟಿ ಎನಿಸಿ ಅವರ ಮನಸ್ಸು ಬೇರೆಡೆಗೆ ಜಾರುವುದೂ ಇಲ್ಲ. ಮಕ್ಕಳು ಹಾದಿ ತಪ್ಪಬಹುದೆಂಬ ಸಂಶಯವೂ ನಿಮಗಿರುವುದಿಲ್ಲ. ಅಲ್ಲವೇ.......?

Tuesday 23 February 2010

ಧ್ವನಿ ೨ನೇ ಸಂಚಿಕೆ

Please double click on this image
Please double click on this image