Thursday 3 December 2009

`ಮಹಾಮಾರಿ'ಯತ್ತ ಸ್ವಲ್ಪ ಕರುಣೆ ಇರಲಿ


ನೆನಪುಗಳ ಸುಳಿ ಬಿಚ್ಚಿಕೊಳ್ಳುವುದೂ ಒಂದರ್ಥದಲ್ಲಿ ಅಪಾಯವಾಗಿಯೇ ತೋರಿತು. ನೆನಪುಗಳ ಆಳಕ್ಕೆ ನಾನೆಂದೂ ಇಳಿದಿಲ್ಲವೆಂದಲ್ಲ. ಆದರೂ ಇಂದು ಆ ನೆನಪು ನನ್ನ ಕಣ್ಣಂಚಿನಲ್ಲಿ ಮತ್ತೊಮ್ಮೆ ನೀರ ಹನಿಯನ್ನು ಚಿಮುಕಿಸಿ ಮರೆಯಾಯಿತು.
ಯಾವುದನ್ನು ಅತ್ಯಂತ ಅಸಹನೀಯವಾಗಿ ನಾನು ನೋಡುತ್ತಿದ್ದೆನೋ ಅದೇ ಏಡ್ಸ ಮಹಾಮಾರಿಗೆ ತುತ್ತಾಗಿ ಆ ಅಣ್ಣ ವಿಧಿಗೆ ಶರಣಾಗಿದ್ದ. ಡಿಸೆಂಬರ್ 1 ಏಡ್ಸ ದಿನದ ಶುಭಾಶಯಗಳು ಎಂಬ ಮೆಸೇಜ್ ನನ್ನನ್ನು ವಿಚಿತ್ರವಾಗಿ ಕಾಡಿತು. ಬೆಳಿಗ್ಗೆ ಎದ್ದೊಡನೆಯೇ ಸ್ನೇಹಿತನೊಬ್ಬನಿಂದ ಬಂದ ಮೆಸೇಜ್ನ್ನು ನೋಡಿ ಭಾವುಕಳಾಗುವಷ್ಟರಲ್ಲಿ ನನಗೆ ಗೊತ್ತಿಲ್ಲದೆಯೇ ಅದನ್ನು ಅಳಿಸಿಬಿಟ್ಟೆ.
ಚಿಕ್ಕಂದಿನಿಂದ ಕೇರಿಯವರೆಲ್ಲ ಒಟ್ಟಾಗಿ ಆಡಿದ್ದು, ಮಾಡಿದ ಜಗಳಗಳ ಕ್ಷಣಗಳು ಇಂದಿಗೂ ಹಸಿರಾಗಿಯೇ ಇವೆ. ಎಲ್ಲರ ದಾರಿ ಬೇರೆಯಾದರೂ ಆ ದಿನಗಳನ್ನು ನೆನೆಸಿಕೊಳ್ಳೋದೇ ಒಂದು ಸಂತಸ. ಅವರಲ್ಲಿ ನನ್ನ ನೆಚ್ಚಿನ ಅಣ್ಣ, ಜೀವನದಲ್ಲಿ ದುರಂತ ಅಂತ್ಯ ಕಂಡ ಆತನ ನೆನಪು ಮತ್ತೆ ಮತ್ತೆ ಇಣುಕಿ ಬರುತ್ತಲೇ ಇದೆ.
ಅತ್ಯಂತ ಸಣ್ಣಗೆ, ಎತ್ತರವಾಗಿ ಎಂದಿಗೂ ನಗುತ್ತಾ ಎಲ್ಲರ ಜೊತೆ ಬೆರೆಯುತ್ತಿದ್ದ. ಸದಾ ಬೇರೆಯವರನ್ನು ನಗಿಸುತ್ತಾ, ಇನ್ನೊಬ್ಬರಿಗೆ ಬೇಜಾರು ಮಾಡಬಾರದೆಂದು ಸದಾ ಬಯಸುವ ಮನಸ್ಸು ಅಣ್ಣನದ್ದು.
ನಾನು ಮತ್ತು ನನ್ನ ಅಕ್ಕ ಎಂದರೆ ಎಲ್ಲಿಲ್ಲದ ಪ್ರೀತಿ ಅವನಿಗೆ. ನಾವೆಲ್ಲ ಚಿಕ್ಕವರಿರುವಾಗ ನಿದ್ದೆ ಮಾಡುತ್ತಿದ್ದರೆ, ನಾವು ಎಚ್ಚರವಾಗುವುದನ್ನೇ ಕಾಯುತ್ತಾ ಕುಳಿತುಕೊಳ್ಳುತ್ತಿದ್ದನಂತೆ. ನಂತರ ಬಿಡದೆ ನಮ್ಮನ್ನು ಆಡಿಸುತ್ತಿದ್ದನಂತೆ. ಪ್ರತಿ ಸಲ ಪೇಟೆಯಿಂದ ಬರುವಾಗ ನನಗೆ ಅಕ್ಕನಿಗೆ ಮರೆಯದೆ ತಿಂಡಿ ತಂದು ಕೊಡುತ್ತಿದ್ದ. ಅವನ ನೆಚ್ಚಿನ `ಅಪ್ಪಿ'ಗಳಾಗಿದ್ದೆವು ನಾವಿಬ್ಬರೂ. ಹೆಚ್ಚಾಗಿ ನಾವು ಆಟವಾಡಿಕೊಂಡಿರುತ್ತಿದ್ದುದೇ ಅವನ ಮನೆಯಲ್ಲಿ.
ಅವನು ನಮ್ಮನ್ನಗಲಿ ಸುಮಾರು 8 ತಿಂಗಳ ಆಯಿತು. ಮದುವೆಯಾಗಿ ಸರಿಯಾಗಿ ಒಂದು ವರ್ಷ ಭತರ್ಿಯಾಯಿತು.
ಯಾವಾಗ ಈ ಮಹಾಮಾರಿ ಏಡ್ಸ್ ಅವನನ್ನು ಪ್ರವೇಶಿಸಿ ದೇಹವನ್ನು ರೋಗಗಳ ಗೂಡಾಗಿಸಿತ್ತೋ, ಸದಾ ನಗಿಸುವ ನಗುವ ಅವನ ಸಂತಸವನ್ನು ಕಿತ್ತುಕೊಳ್ಳಲು ವಿಧಿ ಎಂದಿನಿಂದ ಅಪೇಕ್ಷಿಸಿತ್ತೋ, ಜೀವನದ ಬಗೆಗೆ ಆತ ಕಟ್ಟಿದ ಆಸೆಗಳ ಸೌಧವನ್ನು ಹಂತ ಹಂತವಾಗಿ ಮುಗಿಸಲು ಸಂಚು ರೂಪಿಸಿತ್ತೋ ಬಲ್ಲವರಾರು......?
ಮದುವೆಯಾದ ಹೊಸತರಲ್ಲೇ ಬಿಡದೆ ಕಾಣಿಸಿಕೊಂಡಿದ್ದು ಜ್ವರ. ಇದು ಮಾಮೂಲಿ ಎಂದು ಸುಮ್ಮನಿದ್ದ ಅವನಿಗೆ 15 ದಿನಗಳ ಮೇಲೆ ತಿಳಿದಿದ್ದು ತನ್ನ ದೇಹ ಏಡ್ಸ್ಗೆ ಬಲಿಯಾಗಿದೆ. ತಿರುಗಿ ಬರಲಾರದ ಹಾದಿ ತುಳಿದಾಗಿದೆ ಎಂದು. ವಿಷಯ ಕಾಡ್ಗಿಚ್ಚಿನಂತೆ ಊರು ಕೇರಿ ಹಬ್ಬಿಹೋಯಿತು. ಎಲ್ಲರ ಬಾಯಲ್ಲೂ ಅಣ್ಣನೇ. ವಿಷಯ ನನಗೆ ತಿಳಿದಾಗ ದಂಗಾಗಿ ಹೋಗಿದ್ದೆ. ಸುಳ್ಳು ಸುದ್ದಿಯಾಗಿರಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದೆ. ನಿದ್ದೆಗಳೂ ಮಾಸುವಂತೆ ಹಗಲು ರಾತ್ರಿ ಎನ್ನದೇ ಚಿಂತಿಸಿದ್ದೆ.
ಎಲ್ಲರ ಸಂಶಯ ನೋಟ, ಕೊಂಕು ನುಡಿಗಳು, ನಿರಾಶೆಯುಕ್ತ ಬದುಕು ಈ ಎಲ್ಲ ನೋವುಗಳ ಜೊತೆಗೆ ಅಣ್ಣ ನೇಣಿಗೆ ಶರಣಾಗಿದ್ದ. ಏನೂ ಅರಿಯದೆ ಮುಗ್ಧೆಯೊಬ್ಬಳು ಆಗತಾನೆ ಆತನ ಬಾಳಸಂಗಾತಿಯಾಗಿ ಏಡ್ಸ ದಾರಿಯಲ್ಲಿ ಕಾಲಿಟ್ಟಿದ್ದಳು. ಮರಕ್ಕೆ ನೇತಾಡುತ್ತಿರುವ ಅವನನ್ನು ಆ ದಿನ ಬಿಡದೆ ನೋಡುತ್ತಾ ನಿಂತಿದ್ದೆ. ಮನೆಯವರ ಅಳು ಮುಗಿಲು ಮುಟ್ಟಿತ್ತು.
ಒಡಹುಟ್ಟಿದ ಅಣ್ಣನಲ್ಲದಿದ್ದರೂ ಆ ನೆಚ್ಚಿನ ಅಣ್ಣನ ಭೀಕರ ಸಾವು ಆಗಾಗ ಕಣ್ಣಿರು ಬರಿಸುತ್ತದೆ. ಅವನ ಮುಖ, ಆಡಿದ ಕ್ಷಣಗಳು, ಮದುವೆಯೆಂದಾಗ ಸಂಭ್ರಮಿಸಿ ಖುಷಿಪಟ್ಟ ಅವನ ಸಂತಸ ನಾಲ್ಕೇ ನಾಲ್ಕು ತಿಂಗಳಿಗೆ ಸೀಮಿತವೆಂದು ಯಾರೂ ಭಾವಿಸಿರಲಿಲ್ಲ. ಹೆತ್ತ ತಾಯಿ ಅನಾಥವಾಗುತ್ತಾಳೆಂದು ಯಾರೂ ಊಹಿಸಿರಲಿಲ್ಲ. ಆ ಮನೆ ದಿಕ್ಕಿಲ್ಲದ ಪರದೇಶಿಯಂತೆ ಒಂಟಿಯಾಗಿರುತ್ತದೆಂದು ಯಾರೂ ಯೋಚಿಸಿರಲಿಲ್ಲ. ಮುಚ್ಚಿದ ಬಾಗಿಲು ತೆರೆದು ಒಳ ಹೋಗಲು ಅಸಹನೀಯವಾಗುತ್ತದೆಂದು ಯಾರೂ ತಿಳಿದಿರಲಿಲ್ಲ. ಇರುವ ತನ್ನೆಲ್ಲ ಜವಾಬ್ದಾರಿ ಕಳೆದುಕೊಂಡು ಸಾವನ್ನು ಅಪ್ಪಿಕೊಳ್ಳತ್ತಾನೆಂಬುದರ ಯೋಚನೆ ಯಾರಿಗೂ ಬಂದಿರಲಿಲ್ಲ.
ಸಾಯುವ ಮುಂಚಿನ ದಿನ ಎಲ್ಲರ ಮನೆಗೆ ಬಂದು ಹೋದ ಅಣ್ಣ ಯಾರಿಗೂ ಸುಳಿವು ನೀಡಿರಲಿಲ್ಲ. ಆತ್ಮಹತ್ಯೆಗೆ ಶರಣಾಗುವ ನಿಧರ್ಾರ ಆದ ನೋವಿನ ತೀವ್ರತೆಯನ್ನು ತಿಳಿಸಿತ್ತು. ವಿದಾಯದ ಕರಿ ನೆರಳು ಊಹೆಗೆ ನಿಲುಕಿದ್ದರೂ ತಡೆಯಬಹುದಿತ್ತೇನೋ. ಇನ್ನೊಂದು ದುರಂತ ಕಥೆಗೆ ಸಾಕ್ಷಿಯಾಗಿ ಮರೆಯಾದ.......
ಇದು ನನಗೆ ಗೊತ್ತಿರುವ ಒಂದು ಉದಾಹರಣೆ. ಏಡ್ಸ್ ತೆಕ್ಕೆಗೆ ಬಿದ್ದು ತೊಳಲಾಡುತ್ತಿರುವವರ ಇಂಥ ಎಷ್ಟೊ ದುರಂತ ಕಥೆಗಳು ನಮ್ಮ ಮುಂದಿವೆ. ಅವಕ್ಕೆ ಕಾರಣಗಳು ಏನೇ ಇರಬಹುದು. ಮೊದಲೇ ಖಾಯಿಲೆಯ ಇರುವಿಕೆಯಿಂದ ಕಂಗಾಲಾದ ಅವರಿಗೆ ಎಲ್ಲರ ಸಾಂತ್ವನ ಬೇಕು. ಭರವಸೆ ನೀಡುವ ಮಾತುಗಳು ಬೇಕು. ಮೊದಲಿನಂತಿನ ಪ್ರೀತಿ, ಸ್ನೇಹ ಆತ್ಮೀಯ ನುಡಿಗಳು ಬೇಕು......
ಕಾರಣಗಳ ಹಿಂದೆ ಗಿರಕಿ ಹೊಡೆಯುವ ಬದಲು ಪರಿಹಾರಗಳ ಸುತ್ತ ಸುತ್ತೋಣ. ನೊಂದ ಜೀವಗಳ ದುಃಖ ಕೇಳಿ ಸಮಾಧಾನಿಸೋಣ.

ಶೀಷರ್ಿಕೆಯ ಬಗೆಗೆ ಒಂದಿಷ್ಟು

ಆಳ್ವಾಸ್ ನುಡಿಸಿರಿಗೆ ಮೊದಲ ಸಲ ಭೇಟಿ ನೀಡಿದ್ದೆ. ಅಲ್ಲಿ ನಡೆಯುತ್ತಿದ್ದ ಕವನ ಗೋಷ್ಠಿಯಲ್ಲಿ ಕುಳಿತಿದ್ದೆ. ಕಾರಣ ನಾನೂ ಕವನ ಬರೆಯಬೇಕೆಂಬ ಬಯಕೆ ನನ್ನನ್ನು ಅಲ್ಲಿ ಕುಳಿಸಿತ್ತು.
ಮೌನ ಮಾತಾಡಿತು ಎಂಬ ಕವನದ ಪ್ರಾರಂಭ ಕೇಳಿ ನನ್ನ ಮನಸ್ಸು ಯೋಚನೆಗೆ ಪ್ರಾರಂಭಿಸಿತು. ಮೌನ ಎಂದರೆ ಮಾತಿಲ್ಲದ್ದು ಎಂದಷ್ಟೇ ತಿಳಿದಿದ್ದ ನನಗೆ ಇದು ಅತ್ಯಂತ ಕುತೂಹಲ ಮೂಡಿಸಿತು.
ಮೌನ ಮಾತಾಡಲು ಸಾಧ್ಯವಾ? ಇದಕ್ಕೆ ಬೇರೊಂದು ಅರ್ಥ ಕಲ್ಪಿಸಬಹುದಾ? ಕಲ್ಪಿಸಬಹುದಾದರೆ ಯಾವೆಲ್ಲ ಅರ್ಥ ಕಲ್ಪಿಸಬಹುದು ಎಂಬೆಲ್ಲಾ ಪ್ರಶ್ನೆಗಳು ನನ್ನನ್ನು ಬಹುವಾಗಿ ಕಾಡಲಾರಂಭಿಸಿದವು. ಯೋಚಿಸಿದಂತೆ ಮೌನಕ್ಕೆ ಹೊಸ ಹೊಸ ಅರ್ಥಗಳು ಸಿಗಲಾರಂಭಿಸಿದವು. ಯಾವುದೇ ವಿಷಯದ ಗಟ್ಟಿತನಕ್ಕೆ ಮೌನ ಸಾಕ್ಷಿಯಾಗಬಲ್ಲುದು.
ಮಾತು ಮುರಿದ ಮಾತ್ರಕ್ಕೆ ಎಲ್ಲ ಮುಗಿಯಿತು ಎಂದಲ್ಲ. ಸಂದರ್ಭಕ್ಕೆ ತಕ್ಕಂತೆ ಇದರ ವ್ಯಕ್ತಿತ್ವ ಬದಲಾಗುತ್ತಲೇ ಇರುತ್ತದೆ. ಸಂತಸ, ತೃಪ್ತಿ, ಸಿಟ್ಟು, ಆಕ್ರೋಶ ಓ... ಇದರ ಮುಖ ಊಹೆಗೆ ನಿಲುಕದ್ದು......
ಇದ್ಯಾಕೆ ಇವಳು ಪುರಾಣ ಬರೀತಾ ಇದಾಳೆ ಎಂದು ಬೇಸರಿಸಿಕೊಳ್ಳಬೇಡಿ. ಮೌನಕ್ಕೆ ಮೌನವೊಂದೇ ಸಾಟಿ ಎಂದು ಭಾವಿಸಿದ್ದ ನನಗೆ ಅದಕ್ಕೂ ಮಾತಿದೆ ಎಂದು ತಿಳಿದ ಮೇಲೆ ಸುಮ್ಮನಿರಲಾಗಲಿಲ್ಲ. ಬರವಣಿಗೆಯ ವಿಷಯದಲ್ಲಿ ಯಾವತ್ತೂ ಮೌನವಾಗಿದ್ದ ನಾನೂ ಅದಕ್ಕೊಂದು ದನಿ ಹುಡುಕಬೇಕೆಂದು ಬಯಸಲು ಪ್ರಾರಂಭಿಸಿದೆ. ನನ್ನಲ್ಲಿನ ಇಂದಿನವರೆಗೆ ಮೌನವಾಗಿದ್ದ ಯೋಚನೆಗಳಿಗೆ, ಅನುಭವಗಳಿಗೆ, ಅನಿಸಿಕೆಗಳಿಗೆ ಗರಿಮೂಡಿಸಿ ಅದರ ದನಿಯನ್ನು ಎಲ್ಲೆಡೆ ಪಸರಿಸುವ ಆಸೆ.
ಹೀಗಾಗಿ ನನ್ನೀ ಬ್ಲಾಗ್ಗೆ ಮೌನಧ್ವನಿ ಎಂದೇ ಹೆಸರಿಟ್ಟಿದ್ದೇನೆ. ದನಿ ನಿಧಾನವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಿಮ್ಮ ಮೇಲೇ ಹಾಕುತ್ತಿದ್ದೇನೆ. ನಿಮ್ಮ ಮಾತುಗಳಿಗೆ, ನಿಮ್ಮ ಕಳಕಳಿಯ ಹಿತನುಡಿಗಳಿಗೆ ನಾನೆಂದೂ ಸಿದ್ಧ. ನೀವೂ ನನ್ನ ಜೊತೆಗಿದ್ದು ಬರವಣಿಗೆಯ ಆಸೆಗೆ ಗರಿ ನೀಡುತ್ತೀರಿ ಎಂದು ನಂಬಿದ್ದೇನೆ.
ಇಂತಿ ನಿಮ್ಮ ಪ್ರೀತಿಯ ಮೌನ, ದನಿಯಾಗಿ......